ವಿಟ್‍ಮನ್, ವಾಲ್ಟ್
	1819-92. ಪ್ರಸಿದ್ಧ ಅಮೆರಿಕನ್ ಕವಿ. ಈತ 1819ರಲ್ಲಿ ಜನಿಸಿದ. ತಾರುಣ್ಯದ ದಿನಗಳಲ್ಲಿ ಕಂಪೋಸರ್, ಉಪಾಧ್ಯಾಯ ಮತ್ತು ಪತ್ರಿಕೋದ್ಯಮಿಯಾಗಿ ದುಡಿದ. ಇವನ ಆರಂಭದ ಕಾವ್ಯಸೃಷ್ಟಿ ಸಾಂಪ್ರದಾಯಿಕ ಮತ್ತು ಸಾಮಾನ್ಯ. ಆದರೆ ಬೈಬಲ್, ಹೋಮರ್, ಹಿಂದುಧರ್ಮ ಗ್ರಂಥಗಳು ಮತ್ತು ಎಮರ್‍ಸನ್‍ನ ಅಧ್ಯಯನ; ಬಹುದೂರ ದೇಶಗಳಲ್ಲಿ ಇವನು ಮಾಡಿದ ಪ್ರಯಾಣ; ಜೀವನದ ಮತ್ತು ಮನುಷ್ಯರ ಅದರಲ್ಲೂ ಹೆಚ್ಚಾಗಿ ಕಾರ್ಮಿಕ ವರ್ಗದವರ ಪರಿಚಯದಿಂದಾದ ಅನುಭವಗಳು-ಇವೆಲ್ಲ ಇವನಲ್ಲಿ ಮಹತ್ತರವಾದ ಪರಿವರ್ತನೆಯನ್ನುಂಟುಮಾಡಿದುವು. ಲೀವ್ಸ್ ಆಫ್ ಗ್ರಾಸ್ (1848) ಇವನ ಪ್ರಸಿದ್ಧ ಕೃತಿ. ಕವಿಯೇ ಹೇಳಿಕೊಂಡಿರುವಂತೆ ಹೆಮ್ಮೆಯ ಉಚ್ಚಸ್ವರ, ಸ್ವಾತಂತ್ರ್ಯದ ಉಡಾಫೆ ಇಲ್ಲಿದೆ. ಪ್ರಾಚೀನ ಯುರೋಪು ಮತ್ತು ಏಷ್ಯ ಖಂಡದಲ್ಲಿ ಕಂಡುಬಂದಿದ್ದ ಜನತಂತ್ರ ವಿರೋಧಿ ನೆಲೆಗಳನ್ನು ಧಿಕ್ಕರಿಸಿ ಎಲ್ಲ ಬಗೆಯ ಬಿಗಿಮುಷ್ಟಿಯನ್ನು ನಿವಾರಿಸಲು ಮನಸ್ಸನ್ನು ಸಡಿಲಗೊಳಿಸಿ ಇನ್ನೂ ಆಗದಿರುವ ಅಮೆರಿಕವನ್ನು ಮೂಢ ನಂಬಿಕೆಗಳಿಂದ ಮುಕ್ತವಾಗಿಸಬೇಕಾಗಿದೆ. ಈ ಕಾವ್ಯದ ಪ್ರತಿಯೊಂದನ್ನು ಎಮರ್ಸನ್‍ರಿಗೆ ಕಳುಹಿಸಿದಾಗ ಅದನ್ನು ಓದಿದ ಎಮರ್ಸನ್ ಅಭಿಪ್ರಾಯ ಪಟ್ಟಿದ್ದು ಹೀಗೆ: “ಅಮೆರಿಕ ಇದುವರೆಗೆ ಕಾಣದಿದ್ದಂಥ ನೈಪುಣ್ಯ ಮತ್ತು ವಿವೇಕ ಈ ಕಾವ್ಯದಲ್ಲಿದೆ.” ಮೊದಲನೆಯ ಆವೃತ್ತಿಯಲ್ಲಿ 12 ಕವನಗಳಿದ್ದುವು; 1856ರಲ್ಲಿ ಬಂದ ಎರಡನೆಯ ಆವೃತ್ತಿಯಲ್ಲಿ ಇನ್ನೂ 21 ಕವನಗಳು ಸೇರ್ಪಡೆಯಾದವು; 1860ರ ಮೂರನೆಯ ಆವೃತ್ತಿಗೆ 122 ಕವನಗಳು ಸೇರಿಕೊಂಡವು. ಕವಿಯ ಜೀವಿತಾವಧಿಯಲ್ಲಿ ಪರಿಷ್ಕಾರವಾಗುತ್ತ ಈ ಕವನ ಸಂಕಲನದ ಇನ್ನೂ ಆರು ಆವೃತ್ತಿಗಳು ಬೆಳಕು ಕಂಡವು. ಕವಿ ಬೆಳೆದ ಹಾಗೆ ಕಾವ್ಯವೂ ಬೆಳೆಯುತ್ತ ಹೋಯಿತು. ಲೀವ್ಸ್ ಆಫ್ ಗ್ರಾಸ್ ಕೃತಿಯನ್ನು ಹುಲ್ಲಿನ ದಳಗಳು ಎಂಬ ಹೆಸರಿನಲ್ಲಿ ಎಂ.ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ ಅನುವಾದಿಸಿದ್ದಾರೆ. 

	ಅಮೆರಿಕದಲ್ಲಿ ಅಂತ ರ್ಯುದ್ಧ ಪ್ರಾರಂಭವಾದ ಮೇಲೆ, ಯುದ್ಧದಲ್ಲಿ ಗಾಯ ಗೊಂಡ ಸೈನಿಕರ ಶುಶ್ರೂಷಣಾ ಕಾರ್ಯವನ್ನು (ಅನಧಿಕೃತ ವಾಗಿ) ನಡೆಸಿದ. ಬಡತನದ ಬೇಗೆಯನ್ನೂ ಅನುಭವಿಸಿದ. ಬಾಳಿನ ಅಂತ್ಯ ಕಾಲದಲ್ಲಿ ಕ್ಯಾಂಡೆನ್‍ನಲ್ಲಿ ನೆಲಸಿ, ಲೀವ್ಸ್ ಆಫ್ ಗ್ರಾಸ್ ಕಾವ್ಯವನ್ನು ತಿದ್ದಿ ವಿಸ್ತರಿಸುವ ಕಾರ್ಯದಲ್ಲಿ ತೊಡಗಿದ. ಪ್ರಜಾಪ್ರಭುತ್ವದಲ್ಲಿ ಅಚಲವಾದ ವಿಶ್ವಾಸ; ಜನ ಸಾಮಾನ್ಯರ ಮಾನವೀಯತೆಯಲ್ಲಿ ದೃಢವಾದ ನಂಬಿಕೆ; ವಿರೋಧವನ್ನು ಸಹಿಸದ ವ್ಯಕ್ತಿಸ್ವಾತಂತ್ರ್ಯ; ದಬ್ಬಾಳಿಕೆಯ ಕ್ರೌರ್ಯಕ್ಕೆ, ಹಿಂಸೆಗೆ ಒಳಗಾದವರ ವಿಷಯದಲ್ಲಿ ಅನುಕಂಪ; ನಿಸರ್ಗಪ್ರೇಮ; ಕಡುನಿಷ್ಠೆಯ ಮತವಿಚಾರಗಳಲ್ಲಿ ಅನಾಸಕ್ತಿ; ಜೀವನದ ಎಲ್ಲಾ ವಿಚಾರಗಳಲ್ಲೂ ಆಶಾವಾದಿತ್ವ, ಗೆಲವು ನೋಟ; ಆಧ್ಯಾತ್ಮಿಕತೆ, ಅತೀಂದ್ರಿಯವಾದಿತ್ವ-ಇವು ಇವನ ವೈಯಕ್ತಿಕ ಸಿದ್ಧಾಂತ ಸೂತ್ರಗಳು. ಇವನ ಅನುಭಾವ, ಪೌರ್ವಾತ್ಯ ಮನೋಧರ್ಮಕ್ಕೆ ಅನುಗುಣವಾಗಿತ್ತೆಂದು ಹೇಳಬಹುದು. 

	ಅಮೆರಿಕದ ಜನ ಆರಂಭದಲ್ಲಿ ಈತನನ್ನು ಆದರಿಸಲಿಲ್ಲ. ಇಂಗ್ಲೆಂಡಿನಲ್ಲಿ ರೊಸೆಟ್ಟ, ಸ್ವಿನ್‍ಬರ್ಗ್‍ರಂಥ ಕವಿಗಳು ಈತನನ್ನು ವಿಲಿಯಂ ಬ್ಲೇಕ್‍ಗೆ ಹೋಲಿಸಿದರು; ಶ್ರೀಮತಿ ಗಿಲ್‍ಕ್ರಿಸ್ಟ್, ಎಡ್ವರ್ಡ್ ಕಾರ್ಪೆಂಟರ್ ಈತನ ಕಾವ್ಯದ ಹೊಸತನವನ್ನು ಗುರುತಿಸಿದರು. ಇವನ ಕಾವ್ಯ ಮುಕ್ತವೂ ಸದೃಢವೂ ಆಗಿದ್ದು ಏಕಕಾಲದಲ್ಲಿ ರಾಷ್ಟ್ರೀಯತೆಯನ್ನು, ನಿಗೂಢತಮ ಲೈಂಗಿಕತೆಯನ್ನು ಮತ್ತು ವಿಶಿಷ್ಟ ವೈಯಕ್ತಿಕತೆಯನ್ನು ಪ್ರಕಟಿಸುವುದರಿಂದ ಅನಂತರದ ಲೇಖಕರಾದ ಹೆನ್ರಿ ಮಿಲರ್, ಡಿ.ಎಚ್. ಲಾರೆನ್ಸ್, ಹಾರ್ಬ್ ಕ್ರೇನ್ ಮೊದಲಾದವರ ಮೇಲೆ ಪ್ರಭಾವ ಬೀರಿರುವು ದನ್ನು ಕಾಣುತ್ತೇವೆ. ಈತ 1892ರಲ್ಲಿ ನಿಧನನಾದ.
	(ಎಮ್.ಕೆ.ಎನ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ